- ಶೇಕಬ್ಬನವರ ಕೃಷಿ ಮಾದರಿ
- ಪ.ರಾಮಕೃಷ್ಣ ಶಾಸ್ತ್ರಿ
ಮೂಲತಃ ಪುತ್ತೂರು ತಾಲೂಕಿನವರಾದ ಶೇಕಬ್ಬ 50ವರ್ಷಗಳ ಹಿಂದೆ ಕೃಷಿಯ ಮಾರ್ಗ ಹುಡುಕುತ್ತಾ ಬೆಳ್ತಂಗಡಿ ತಾಲೂಕಿನ ಕಾಪಿನಡ್ಕಕ್ಕೆ ಬಂದವರು. ಹುಲಿ ನೆಲೆಸಿದ್ದ ಉದಯಗಿರಿಯ ದಟ್ಟ ಕಾಡಿನ ಇಳಿಜಾರಿನಲ್ಲಿ ಸಮತಟ್ಟು ಮಾಡಿ ಅಡಕೆ, ತೆಂಗು, ರಬ್ಬರ್ ಬೆಳೆಸಿದ್ದು ಅವರ ಸಾಹಸಮಯ ಕೃಷಿ ಸಾಧನೆಗೆ ತಕ್ಕ ಸಾಕ್ಷಿ. 60 ದಾಟಿದ್ದರೂ ಹರಯದ ಉತ್ಸಾಹದಿಂದ ಅವರು ಈಗಲೂ ತೋಟದಲ್ಲಿ ದುಡಿಯುತ್ತಾರೆ. ಕೃಷಿಯಿಂದ ದುರ್ಭಿಕ್ಷವಿಲ್ಲ ಎಂಬ ಮಾತಿಗೆ ಶೇಕಬ್ಬರ ಜೀವನೋತ್ಸಾಹ ಅಪ್ಪಟ ಉದಾಹರಣೆ.
ದೀರ್ಘಕಾಲಿಕ ಬೆಳೆಗಳ ಜತೆಗೆ ಪ್ರತಿವರ್ಷ ತರಕಾರಿ ಬೆಳೆದು ಕೈತುಂಬಾ ಗಳಿಸಿ ಮನೆ ಖರ್ಚು ನಿಭಾಯಿಸುವ ಶೇಕಬ್ಬ ಕಾಡಿನ ನೆಲವನ್ನು ಸಮತಟ್ಟು ಮಾಡಿ ವೈವಿಧ್ಯಮಯ ತರಕಾರಿಗಳನ್ನು ಬೆಳೆಯು ತ್ತಾರೆ. ಧಾರಾಳವಾಗಿರುವ ನದಿ ನೀರು ಅವರ ಬೆಳೆಗಳಿಗೆ ತಂಪನ್ನೀಯುತ್ತಿದೆ. ಹೀಗಾಗಿ ಅವರಿಗೆ ನೀರಿನ ಕೊರತೆ ಇಲ್ಲ.
ಶೇಕಬ್ಬರ ಪ್ರಮುಖ ತರಕಾರಿ ಬೆಳೆಗಳು ಬಸಳೆಯು ನಾಟಿ ಮಾಡಿ ಚೆನ್ನಾಗಿ ಸಾಕಿದರೆ ಒಂದು ತಿಂಗಳಿನಲ್ಲೇ ಮಾರಾಟಕ್ಕೆ ಒದಗುತ್ತದೆ. ರೋಗ ಮತ್ತು ಕೀಟಬಾಧೆಯಿಲ್ಲ.ಬಸಳೆ ಎಷ್ಟಿದ್ದರೂ ಗಿರಾಕಿಯಿದೆ. ಹೀಗಾಗಿ ಲಾಭ ಬೇಕೆನ್ನುವವನಿಗೆ ಬಸಳೆಗಿಂತ ಸೂಕ್ತ ತರಕಾರಿ ಬೇರೊಂದಿಲ್ಲ ಎಂಬುದು ಅವರ ಅಭಿಮತ. ಹಾಗೆಯೇ ಬಿಳಿ ಬಣ್ಣದ ದಪ್ಪ ಗಾತ್ರದ ಬದನೆ ಬೆಳೆಯುತ್ತಾರೆ. ಇದರ ಗಿಡಗಳು ಬೇರೆ ಜಾತಿಗಿಂತ ಇಮ್ಮಡಿ ಎತ್ತರವಾಗಿ ಫಸಲೂ ಹೆಚ್ಚು ಸಿಗುತ್ತದೆ. ಕೊನೆಯಾಗುವವರೆಗೂ ಕಹಿಯಾಗದಿರುವುದು ಈ ಬದನೆಯ ವೈಶಿಷ್ಟÂ ಎನ್ನುತ್ತಾರೆ.
ರುಚಿಯಿಲ್ಲದ ಹೈಬ್ರಿಡ್ ತೊಂಡೆಕಾಯಿ ಮಾರಾಟದ ದೃಷ್ಟಿಯಿಂದ ಲಾಭಕರವಾದರೂ ಆರೋಗ್ಯಕರವಾದ ಊರ ತೊಂಡೆ ಬೆಳೆಯುವುದರಲ್ಲೇ ಶೇಕಬ್ಬರಿಗೆ ಆಸಕ್ತಿ. ತೊಂಡೆಯ ಅನೇಕ ಚಪ್ಪರಗಳು ಅವರಲ್ಲಿವೆ. ಗಾತ್ರದಲ್ಲಿ ಚಿಕ್ಕದು, ನೂರು ಕಾಯಿಗಳು ಎರಡೇ ಕಿಲೋ ತೂಗುತ್ತವೆ.ಆದರೆ ಇದಕ್ಕೆ ಅಧಿಕ ರುಚಿ ಹಾಗೂ ಅಧಿಕ ಬೇಡಿಕೆ. ಈ ತೊಂಡೆಕಾಯಿಗಳಿಗೆ ಕೆ.ಜಿ.ಗೆ 30 ರೂ. ವರೆಗೆ ಧಾರಣೆ ಇದೆ.
ಬೇಸಗೆಯಲ್ಲಿ ತೊಂಡೆ ಕಾಯಿಗಳ ಧಾರಣೆ 20 ರೂ.ಗೆ ಇಳಿದರೂ ವಾರದಲ್ಲಿ ಎರಡು ಸಲ ಕೊಯ್ಯಬಹುದು. ಗಳಿಕೆಯೂ ಅಧಿಕ ಎನ್ನುತ್ತಾರೆ ಶೇಕಬ್ಬ. ಇವರಿಗೆ ವಾರದಲ್ಲಿ 30 ಕೆ.ಜಿ. ಮಾರಾಟಕ್ಕೆ ಸಿಗುತ್ತಿದೆ. ಏಕಪ್ರಕಾರ ತೊಂಡೆಕಾಯಿ ಸಿಗಬೇಕಿದ್ದರೆ ಕಾಯಿ ಕೊಯಿದ ಕೂಡಲೇ ಬುಡಕ್ಕೆ ಸತ್ವಭರಿತ ಗೊಬ್ಬರ ಹಾಕುವ ಕ್ರಮ ತೀರ ಅಗತ್ಯವೆಂಬ ಗುಟ್ಟನ್ನು ಹೇಳುತ್ತಾರೆ. ಇದರ ಜತೆಗೆ ಹಾಗಲಕಾಯಿಯನ್ನೂ ಶೇಕಬ್ಬ ಬೆಳೆಯುತ್ತಾರೆ. ಯಾವ ಸಮಯದಲ್ಲೂ ಬೆಲೆ ಮತ್ತು ಬೇಡಿಕೆ ಇಳಿಯದ ತರಕಾರಿ ಇದು. ಹಾಗಲ ಬಳ್ಳಿಯ ಕೃಷಿ ತೀರ ಸರಳ. ರೋಗ ಬಾಧೆಯಿಲ್ಲ. ಬಳ್ಳಿ ಚೆನ್ನಾಗಿದ್ದರೆ 3 ತಿಂಗಳು ಏಕಪ್ರಕಾರ ಫಸಲು ಸಿಗುತ್ತದೆಂಬುದು ಅವರ ಅನುಭವ.
ಇನ್ನು ರೈತನ ಕೈಹಿಡಿಯುವ ಮುಖ್ಯ ಕೃಷಿಯೆಂದರೆ ವೀಳ್ಯದೆಲೆ ಎನ್ನುತ್ತಾರೆ ಶೇಕಬ್ಬ. ಅವರಲ್ಲಿ ಐವತ್ತು ಗೂಟ ವೀಳ್ಯದೆಲೆ ಬಳ್ಳಿಗಳಿವೆ. ವಾರದಲ್ಲಿ ಒಂದು ಪನ್ನಾಸ್ ಮಾರಾಟಕ್ಕೆ ದೊರಕುತ್ತದೆ. ಈಗ ವೀಳ್ಯದೆಲೆ ದರ ತೀರಾ ಕಡಿಮೆಯಾಗಿದೆ. ಪನ್ನಾಸಿಗೆ 300 ರೂ. ಮಾತ್ರವಿದೆಯಾದರೂ ಬೆಳೆಗಾರನಿಗೆ ನಷ್ಟವಿಲ್ಲವೆಂಬ ಸಂತƒಪ್ತಿಯೂ ಇವರಿಗಿದೆ. ಬಿಸಿಲು ಮತ್ತು ನೀರು ಧಾರಾಳವಾಗಿರುವಲ್ಲಿ ವೀಳ್ಯದೆಲೆಯಿಂದ ಲಾಭ ಹೆಚ್ಚೆನ್ನುತ್ತಾರೆ ಶೇಕಬ್ಬ.
ಶೇಕಬ್ಬ 2ದನಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡುತ್ತಾರೆ. ಅಡಕೆ ಫಸಲೂ ಚೆನ್ನಾಗಿದೆ. ತರಕಾರಿ ಕೃಷಿಗೆ ಅವರು ಹಟ್ಟಿ ಗೊಬ್ಬರ ಬಳಸುವುದು ಒಂದು ಸಲ ಮಾತ್ರ. ಇನ್ನುಳಿದಂತೆ ಅವರು ಮಾಡುವ ಪೋಷಣೆಯ ಬಗೆಯೂ ವಿಶಿಷ್ಟ. ಕಾಂಕ್ರೀಟಿನ ಒಂದು ತೊಟ್ಟಿ ಮಾಡಿದ್ದಾರೆ. ಅದರಲ್ಲಿ ಸೆಗಣಿಯನ್ನು ತೆಳ್ಳಗೆ ಕಲಸಿ ಅರ್ಧ ಕಿಲೋ ಪ್ರಮಾಣದಷ್ಟು ಸುಫಲಾ ರಸಗೊಬ್ಬರವನ್ನು ಮಿಶ್ರಗೊಳಿಸಿ 8ದಿನಗಳ ಕಾಲ ಅದರಲ್ಲೆ ಬಿಟ್ಟು ದಿನವೂ ಕಲಕುತ್ತಾರೆ. ಇದನ್ನು ಪ್ರತಿ ವಾರ ಬಸಳೆ, ವೀಳ್ಯದೆಲೆ ಇನ್ನಿತರ ತರಕಾರಿ ಗಿಡಗಳ ಬುಡಕ್ಕೆ ಮಿತ ಪ್ರಮಾಣದಲ್ಲಿ ಅದನ್ನೇ ಹಾಕುವುದು ಬಿಟ್ಟರೆ ಬೇರೆ ಏನೂ ಇಲ್ಲ. ಇಷ್ಟರಲ್ಲೇ ಫಸಲು ಧಾರಾಳವಾಗಿ ಸಿಗುತ್ತದೆ.
ಗಂಜಳವನ್ನು ಗಿಡಗಳಿಗೆ ಹಾಕುವ ಪದ್ಧತಿ ಒಳ್ಳೆಯದಲ್ಲವೆಂಬ ಮಾತು ಶೇಕಬ್ಬರದ್ದು. ಎರಡು ವಾರಕ್ಕೆ 10 ಕಟ್ಟು ಬಸಳೆಯೇ ಮಾರಾಟಕ್ಕೆ ಸಿಗುತ್ತದೆ. ಕಟ್ಟಿಗೆ 10 ರೂ. ಅಂಗಡಿಯವರು ಖರೀದಿಸುತ್ತಾರೆ. ಶೇಕಬ್ಬರಲ್ಲಿ ವಯಸ್ಸಾದ ಒಂದು ಲೂನಾವಿದೆ. ಸನಿಹದ ಪೆರೊಡಿತ್ತಾಯಕಟ್ಟೆಗೆ ಅದರಲ್ಲಿ ತರಕಾರಿ, ಬಸಳೆಕಟ್ಟು ಇರಿಸಿಕೊಂಡು ನಿಯಮಿತ ದಿನಗಳಲ್ಲಿ ಅವರು ಬರುವುದನ್ನೇ ವ್ಯಾಪಾರಿಗಳು ಕಾಯುವುದು ಇವರ ತರಕಾರಿಯ ಉತ್ತಮ ಗುಣಮಟ್ಟಕ್ಕೆ ತಾಜಾ ಉದಾಹರಣೆ.
ನಿತ್ಯ ಖರ್ಚಿಗೆ ತರಕಾರಿ ಮಾರಾಟದ ಲಾಭವೇ ಸಾಕಾಗುತ್ತದೆ.ಅಡಿಕೆಗೆ ಬೆಲೆ ಬರುವ ವರೆಗೂ ದಾಸ್ತಾನಿಡಲು ಸಾಧ್ಯವಾಗಿದೆಯೆಂದು ಇತರರಿಗೂ ತರಕಾರಿ ಕೃಷಿಯ ಲಾಭದತ್ತ ಬೆರಳು ತೋರುತ್ತಾರೆ ಶೇಕಬ್ಬ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,