ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?
ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...? ಹೀಗೊಂದು ಸಂಶಯ ಮೂಡಿದ್ದು ಮೊನ್ನೆ ಪುತ್ತೂರು ಕ್ಷೇತ್ರದ ಮಾನ್ಯ ಶಾಸಕಿಯಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಯಿಂದ !. ತಾನು ಶಾಸಕಿಯಾಗಿ ಆಯ್ಕೆಯಾದ ನಂತರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಬಾಯ್ಬಿಟ್ಟ ಮಲ್ಲಿಕಾ ಪ್ರಸಾದ್ ತನ್ನದೇ ಸರ್ಕಾರದ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀ ಮುಮ್ತಾಜ್ ಅಲೀಖಾನ್ ರವರ ಬಳಿ ಕೇಳಿದ್ದು ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯ ಎಷ್ಟು ಎಂದಾಗಿತ್ತು. ತನ್ನ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ವಿಧಾನ ಮಂಡಲ ಅಧಿವೇಶನ ಒಂದು ಅತ್ತ್ಯುತ್ತಮ ವೇದಿಕೆ. ಆದರೆ ಇಲ್ಲಿ ಒಬ್ಬ ಶಾಸಕಿ ತನ್ನ ದೀರ್ಘಕಾಲದ ಮೌನದ ನಂತರ ಮೊದಲ ಪ್ರಶ್ನೆ ಕೇಳಿದ್ದು ರಾಜ್ಯದ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳ ಬದಲು ಈ ರಾಜ್ಯದ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ? ಎಂಬುವುದಾಗಿತ್ತು.
ವಾಸ್ತವವಾಗಿ ನೋಡುವುದಾದರೆ ಈ ಪ್ರಶ್ನೆಯೇ ಬಾಲಿಶವಾದದ್ದು. ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ಯಾವುದೇ ಮಂದಿರ ಅಥವಾ ಮಸೀದಿಗಳು ಆರ್ಥಿಕ ಲಾಭದ ಉದ್ದೇಶದಿಂದ ನಿರ್ಮಿಸಲ್ಪಟ್ಟವಲ್ಲ. ಅದೂ ಅಲ್ಲದೆ ಇವುಗಳಲ್ಲಿ ಹೆಚ್ಚಿನವು ಸರ್ಕಾರದ ಯಾವುದೇ ಸಹಾಯವಿಲ್ಲದೆ ಭಕ್ತರ ದೇಣಿಗೆಯಿಂದ ನಿರ್ಮಾಣವಾದಂತಹವುಗಳು. ಇಲ್ಲಿ ಭಕ್ತರು ತಮ್ಮಲ್ಲಿರುವ ದೈವಭಕ್ತಿಯಿಂದ ತಮ್ಮ ದುಡಿಮೆಯ ಒಂದು ಪಾಲನ್ನು ದೇಣಿಗೆ ರೂಪದಲ್ಲಿ ಕೊಟ್ಟು ಆರಾಧನಾಲಯಗಳನ್ನು ನಿರ್ಮಿಸಿ ಅಲ್ಲಿ ಪ್ರಾರ್ಥಿಸುವುದರ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇವುಗಳ ನಿರ್ಮಾಣ ಮನುಷ್ಯನ ಧಾರ್ಮಿಕ ನಂಬಿಕೆಗಳಿಗೆ ಸಂಭಂದಿಸಿದೆಯೇ ಹೊರತು ಇಲ್ಲಿ ಯಾವುದೇ ಲಾಭದ ಉದ್ದೇಶವಿರುವುದಿಲ್ಲ.
ಆದರೂ ಕೆಲವು ಪ್ರಭಾವಿ ವ್ಯಕ್ತಿಗಳು ಕೆಲವು ಧಾರ್ಮಿಕ ಸ್ಥಳಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಆ ಮೂಲಕ ಕೋಟ್ಯಾಂತರ ರೂಗಳನ್ನು ಸಂಪಾದಿಸುವುದರ ಜೊತೆಗೆ ಸರ್ಕಾರದ ಕೃಪಾಕಟಾಕ್ಷದಿಂದ ಅನೇಕ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ತೆರೆದು ಆ ಮೂಲಕ ಸರ್ಕಾರದಿಂದ ಮತ್ತು ವಿಧ್ಯಾರ್ಥಿಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುತ್ತಿರುವುದನ್ನು ಕಾಣಬಹುದು. ಅದೂ ಅಲ್ಲದೆ ಇವರು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ಮಾದರಿ ಆಡಳಿತ ನಡೆಸುತ್ತಿರುವುದನ್ನೂ ಕಾಣಬಹುದು. ಇಂತಹ ಆರ್ಥಿಕ ಲಾಭದಾಯಕ ಜೊತೆಗೆ ರಾಜಕೀಯ ಕೃಪಾಕಟಾಕ್ಷವುಳ್ಳ ಧಾರ್ಮಿಕ ಸ್ಥಳಗಳಿಗೆ ನಮ್ಮ ಮುಖ್ಯಮಂತ್ರಿಗಳು ಬಜೆಟ್ಟಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೊಟ್ಟದ್ದನ್ನೂ ನಾವು ಕಾಣಬಹುದು.
ಇವೆಲ್ಲಾ ನಡೆದದ್ದು ಹೆಚ್ಚಾಗಿ ಮಾನ್ಯ ಮಲ್ಲಿಕಾ ಪ್ರಸಾದರ ಪಕ್ಷದ ಆಡಳಿತದ ಸರ್ಕಾರದಲ್ಲಿ. ಹೀಗಿರುವಾಗ ಮಲ್ಲಿಕಾ ಪ್ರಸಾದ್ ಕೇವಲ ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂಬ ಅವರ ಪ್ರಶ್ನೆ ಅವರಲ್ಲಿರುವ ಕೋಮುವಾದಿ ಮನಸ್ಥಿತಿಯಿಂದ ಬಂದ ಪ್ರಶ್ನೆಯೇ ಹೊರತು ಇದರಲ್ಲಿ ಇನ್ನಾವ ಸಮಾಜಸೇವಾ ಉದ್ದೇಶವೂ ಇಲ್ಲ.
ಈ ಪ್ರಶ್ನೆ ಎಷ್ಟು ಬಾಲಿಶವಾದುದೆಂದರೆ ಸರ್ಕಾರಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂದು ಕೇಳಿದ ರೀತಿ ಇದೆ. ಯಾವ ಸಂಸ್ಥೆಗಳು ಜನರ ಹಣದಿಂದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಾಪಿಸಲ್ಪಟ್ಟಿರುತ್ತವೆಯೋ ಅಲ್ಲಿಗೆ ಮತಭೇಧವಿಲ್ಲದೆ ಸಹಾಯ ಮತ್ತು ಸಹಕಾರ ನೀಡಬೇಕಾದುದು ಪ್ರಜ್ಞಾವಂತ ಸರ್ಕಾರದ ಕರ್ತವ್ಯ. ಆದರೆ ಅವುಗಳಲ್ಲಿ ಲಾಭ ಹುಡುಕುವ ಶ್ರೀಮತಿ ಮಲ್ಲಿಕಾ ಪ್ರಸಾದರ ಅರ್ಥಶಾಸ್ತ್ರ ಜ್ಞಾನವನ್ನು ಯಾವ ರೀತಿ ವಿಮರ್ಶಿಸಬೇಕೆಂದು ಬಹುಶ ಖ್ಯಾತ ಅರ್ಥಶಾಸ್ತ್ರಜ್ಞರಿಗೂ ಸಾಧ್ಯವಾಗಲಾರದು. ಕೇವಲ ಒಂದು ಫ್ಯಾಸಿಸ್ಟ್ ಸಂಘಟನೆಯ ಮುಖಂಡನ ಹೆಂಡತಿ ಎಂಬ ಒಂದೇ ಒಂದು ಕಾರಣಕ್ಕಾಗಿ ಶ್ರೀಮತಿ ಶಕುಂತಲಾ ಶೆಟ್ಟಿಯವರ ಟಿಕೆಟ್ ತಪ್ಪಿಸಿ ಪುತ್ತೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಶ್ರೀಮತಿ ಮಲ್ಲಿಕಾ ಪ್ರಸಾದರ ಬಾಯಿಯಿಂದ ಇಂತಹ ಪ್ರಶ್ನೆಗಳನ್ನಲ್ಲದೆ ಇನ್ನ್ಯಾವುದನ್ನು ನಿರೀಕ್ಷಿಸಲು ಸಾಧ್ಯ...
- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,