ಮಂಗಳವಾರ, ಜೂನ್ 19, 2012


ಗ್ರಾಫಿಕ್ ಡಿಸೈನಿಂಗ್

0
ಗ್ರಾಫಿಕ್ ಡಿಸೈನಿಂಗ್
* ಶ್ರೀದೇವಿ ಅಂಬೆಕಲ್ಲು
ಫೋಟೋ ತೆಗೆಸಿಕೊಳ್ಳುವುದು ಯಾರಿಗಿಷ್ಟ ಇಲ್ಲ? ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಹಾಗೂ ಇನ್ನಿತರ ಅನೇಕ ಸಂದರ್ಭಗಳಲ್ಲಿ ಫೋಟೋ ತೆಗೆಸಿಕೊಳ್ಳುವುದಕ್ಕೆ ಎಲ್ಲರೂ ಫೋಸ್ ಕೊಡುತ್ತಾರೆ. ಹಾಗೆ ತೆಗೆಸಿದನ್ನು ಡಿಸೈನ್ ಮಾಡಿಸಿ, ಫ್ರೇಂ ಹಾಕಿಸಿಟ್ಟುಕೊಳ್ಳುವುದು ಅಂದರೆ ಎಲ್ಲರಿಗೂ ಏನೋ ಒಂದು ಪ್ರೀತಿ.
ಕೈಯ್ಯಲ್ಲೊಂದು ಕ್ಯಾಮೆರಾ ಇಟ್ಟುಕೊಂಡು ಓಡಾಡುವ ಫೋಟೋಗ್ರಾಫರ್ ಹಲವರ ಬದುಕಿನ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯಬಲ್ಲ. ಆ ಚಿತ್ರಗಳಿಗೆ ಗ್ರಾಫಿಕ್ ಡಿಸೈನರ್ ಮತ್ತಷ್ಟು ಬಣ್ಣ, ಹಿನ್ನೆಲೆಯನ್ನು ಬದಲಾಯಿಸಿ ಜೀವ ತಂದುಕೊಡುತ್ತಾನೆ.
ಫೋಟೋ ಶಾಪ್ ಸಾಫ್ಟ್‌ವೇರ್ ತಿಳಿದುಕೊಂಡಿರುವವರು, ಕ್ರಿಯಾಶೀಲತೆ ಕಲಾತ್ಮಕತೆಯಿರುವವರು ಫೋಟೋಶಾಪ್ ವೃತ್ತಿಯನ್ನು ಕೈಗೊಂಡು ಉದ್ಯೋಗ ಕಂಡುಕೊಳ್ಳಬಹುದು. ಇದಕ್ಕಾಗಿಯೇ ಶೈಕ್ಷಣಿಕ ಅರ್ಹತೆ ಬೇಕೆಂದೇನೂ ಇಲ್ಲ ಆಸಕ್ತಿಯಿಂದ ಗ್ರಾಫಿಕ್ ಡಿಸೈನ್ ಬಗ್ಗೆ ತಿಳಿದುಕೊಂಡರೆ ಸಾಕು, ಬದುಕಿಗೊಂದು ಆದಾಯದ ವೃತ್ತಿಯನ್ನಾಗಿಸಿಕೊಳ್ಳಬಹುದು.
ಫೋಟೋ ಶಾಪ್ ಬಗ್ಗೆ ನಿಮಗಿರುವ ಕೌಶಲ ಬಳಸಿಕೊಂಡು ಫೋಟೋಶಾಪ್‌ನ ಲ್ಯಾಬ್‌ಗಳನ್ನು ನಡೆಸಬಹುದು. ಫೋಟೋ ಎಡಿಟಿಂಗ್ ಸರ್ವೀಸ್‌ನ್ನು ಆರಂಭಿಸಬೇಕೆಂದಿದ್ದರೆ ಡಿಜಿಟಲ್ ಚಿತ್ರದ ಎಡಿಟಿಂಗ್ ಮತ್ತು ಚಿತ್ರವನ್ನು ಉತ್ತಮ ಗೊಳಿಸುವ ಕಲೆಯನ್ನು ಕಲಿತಿರಬೇಕು. ಒಬ್ಬ ಫೋಟೋ ಡಾಕ್ಟರ್' ಎಂದು ಕರೆಸಿಕೊಳ್ಳುವಾತ ಚಿತ್ರದಲ್ಲಿ ಬೇಡವಾದುದನ್ನು ತೆಗೆದುಹಾಕುವ, ಬೇಕಾದುದನ್ನು ಸೇರಿಸುವ ಕಲೆಯನ್ನು ತಿಳಿದಿರುತ್ತಾರೆ. ಯಾವುದೋ ಒಂದು ಚಿತ್ರಕ್ಕೆ ಒಳ್ಳೆಯ ಕಲೆ ತಂದುಕೊಡುತ್ತಾನೆ. ಕತ್ತಲಿದ್ದರೆ ಇನ್ನಷ್ಟು ಬ್ರೈಟ್‌ನೆಸ್ ನೀಡುತ್ತಾರೆ. ಹಿನ್ನೆಲೆ (ಬ್ಯಾಕ್‌ಗ್ರೌಂಡ್) ಬಣ್ಣವನ್ನು ಬದಲಾಯಿಸಬಹುದು, ಫೋಟೋದ ಗಾತ್ರವನ್ನು ಹೆಚ್ಚಿಸಬಹುದು. ಆ ಮೂಲಕ ಫೋಟೋಗ್ರಾಫರ್ ಸೆರೆ ಹಿಡಿದ ಅಪೂರ್ವ ಕ್ಷಣಗಳಿಗೆ ಮತ್ತಷ್ಟು ಮೆರುಗು ತಂದುಕೊಡುತ್ತಾರೆ. ಇವೆಲ್ಲವೂ ಉತ್ತಮ ಗುಣಮಟ್ಟದ ಹಾಗೂ ಆಸಕ್ತಿಯ ಕೆಲಸವನ್ನು ಬೇಡುತ್ತವೆ.
ಕೆಲವರ ಅಮೂಲ್ಯ ಫೋಟೋಗಳು ನೀರಿನಿಂದ ಒದ್ದೆಯಾಗಿ ಹಾಳಾಗಿರುತ್ತವೆ. ಬಣ್ಣ ಕಳೆಗುಂದಿರುತ್ತವೆ. ಅಂತಹ ಸಂದರ್ಭದಲ್ಲಿ ಚಿತ್ರಗಳನ್ನು ಸರಿ ಮಾಡಿಸಿಕೊಡಿ ಎಂದುಕೊಂಡು ಬರುವ ಅದೆಷ್ಟೋ ಮಂದಿ ಗ್ರಾಹಕರು ಸಿಗುತ್ತಾರೆ.
ಫೋಟೋಶಾಪ್ ಸಾಫ್ಟ್‌ವೇರ್ ಬಗ್ಗೆ ಅಧ್ಯಯನ ನಡೆಸಿದಾತ ಲ್ಯಾಬ್ ಇಟ್ಟುಕೊಂಡು ಕೂರಬೇಕೆಂದೇನೂ ಇಲ್ಲ. ಬದಲಾಗಿ ಫೋಟೋ ಶಾಪ್, ಗ್ರಾಫಿಕ್ ಶಿಕ್ಷಣವನ್ನು ನೀಡಬಹುದು. ಫೋಟೋ ಶಾಪ್ ಸಾಫ್ಟ್‌ವೇರ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿರುವವರು ಸಾಕಷ್ಟು ಮಂದಿ ಸಿಗುತ್ತಾರೆ. ಫೋಟೋ ಶಾಪ್ ಸಾಫ್ಟ್‌ವೇರ್ ಶಿಕ್ಷಣದ ಜತೆಗೆ ವೀಡಿಯೋ ಎಡಿಟಿಂಗ್ ಬಗ್ಗೆಯೂ ಮಾಹಿತಿ ನೀಡಬಹುದು. ಸ್ವಂತ ವೆಬ್‌ಸೈಟ್ ಆರಂಭಿಸುವುದರ ಮೂಲಕ ಆನ್‌ಲೈನ್ ಲೇಖನಗಳನ್ನು ಬರೆಯಬಹುದು. ಜಾಹೀರಾತುಗಳನ್ನು ರಚಿಸಿ ನೀಡುವುದರ ಮೂಲಕವೂ ಒಳ್ಳೆಯ ಆದಾಯ ಗಳಿಸಬಹುದು.
ಫೋಟೋ ರಿಸ್ಟೋರ್ ಮಾಡಿಟ್ಟು ಬೇಕಾದವರಿಗೆ ಸೇವೆ ಒದಗಿಸಬಹುದು. ಕೆಲವೊಂದು ಸಾಂದರ್ಭಿಕ ಚಿತ್ರಗಳು ಮುದ್ರಣ ಮಾಧ್ಯಮ, ಪತ್ರಿಕೆಗಳಿಗೆ ಬೇಕಾಗುತ್ತವೆ. ಫೋಟೋಗ್ರಫಿ ಮತ್ತು ಫೋಟೋ ಶಾಪ್ ಎರಡೂ ಸೇವೆಯನ್ನು ಒದಗಿಸಬಹುದು. ತಾವೇ ತೆಗೆದ ಫೋಟೋಗಳಿಗೆ ತಾವೇ ಕೆಲಸ ಮಾಡಿ ಪ್ರಿಂಟ್ ಹಾಕಿಸಿ ಕೊಡಬಹುದು. ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಬಹುದು. ಮದುವೆ ಹಾಗೂ ಇತರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಆಲ್ಬಂನ್ನು ತಯಾರಿಸಿ ನೀಡಬಹುದು. ವೆಬ್‌ಸೈಟ್ ಡಿಸೈನ್ ಮಾಡುವುದು, ಡಿಜಿಟಲ್ ಚಿತ್ರಗಳನ್ನು ಎಡಿಟ್ ಮಾಡುವುದು, ಪ್ಯಾಂಪ್ಲೆಟ್, ಪ್ರಿಂಟೆಡ್ ಕ್ಯಾಟಲಾಗ್‌ಗಾಗಿ ಕವರ್ ಪೇಜ್‌ಗೆ ಚಿತ್ರಗಳನ್ನು ಡಿಸೈನ್ ಮಾಡಿಕೊಡಬಹುದು. ಪೋಸ್ಟ್‌ಕಾರ್ಡ್, ಶುಭಾಶಯ ಪತ್ರ, ಬಿಲ್ ಬೋರ್ಡ್ಸ್, ಸಿಡಿ ಮಾಡಿಕೊಡುವುದು, ಸಿನಿಮಾ ಪೋಸ್ಟರ್ಸ್‌ ಅಲ್ಲದೇ ಆನ್ ಲೈನ್ ಜಾಹೀರಾತುಗಳನ್ನು ಡಿಸೈನ್ ಮಾಡಿ ನೀಡಬಹುದು. ಹೀಗೆ ಗ್ರಾಫಿಕ್ ಡಿಸೈನರ್‌ಗಳಿಗೆ ಸಾಕಷ್ಟು ಅವಕಾಶ ಮತ್ತು ಬೇಡಿಕೆಗಳಿವೆ.
ಬಿಡುವಿನ ವೇಳೆಯಲ್ಲಿ ಕಲಿಕೆ
ಫೋಟೋ ಶಾಪ್ ಸಾಫ್ಟ್‌ವೇರ್ ಬಗ್ಗೆ ತಿಳಿದುಕೊಳ್ಳಲು ಕೋರ್ಸ್ ಮಾಡಲೇಬೇಕೆಂದೇನೂ ಇಲ್ಲ. ಸ್ವಅಭಿರುಚಿ ಮತ್ತು ಆಸಕ್ತಿಯಿಂದ ಕಲಿಯಬಹುದು. ಇಂಟರ್ನೆಟ್‌ಗಳಲ್ಲಿ ಈ ಕುರಿತು ಸಾಕಷ್ಟು ಮಾಹಿತಿ ಲಭ್ಯವಿರುತ್ತದೆ. ಮನೆಯಲ್ಲಿಯೇ ಕಂಪ್ಯೂಟರ್ ಇದ್ದರೆ ಬಿಡುವಿನ ವೇಳೆಯಲ್ಲೆಲ್ಲ ಈ ಸಾಫ್ಟ್‌ವೇರ್‌ನ ಜತೆ ಆಟ ಆಡಬಹುದು. ಕ್ರಿಯಾಶಿಲತೆಯ ಡಿಸೈನ್ ಮಾಡಬಹುದು. ಹಿನ್ನೆಲೆ ಸರಿ ಇಲ್ಲದ, ಬಣ್ಣ ಕಳೆಗುಂದಿರುವ ಚಿತ್ರಗಳನ್ನು ಅದ್ಭುತ ಫೋಟೋಗಳನ್ನಾಗಿ ಮಾಡಬಹುದು. ಫೋಟೋ ಎಡಿಟ್ ಮಾಡುವುದನ್ನು ಕಲಿತುಕೊಂಡರೆ, ನೂರು ಫೋಟೋಗಳುಳ್ಳ ಆಲ್ಬಂ ತಯಾರಿಸಲು ಮೂರು ಗಂಟೆ ಸಾಕು. ಇದನ್ನೇ ವೃತ್ತಿಯನ್ನಾಗಿಸಿಕೊಳ್ಳಬಹುದು ಅಥವಾ ಬೇರೆ ಉದ್ಯೋಗ ಮಾಡುವವರಾದರೆ ಉಪಕಸುಬನ್ನಾಗಿಯೂ ಮಾಡಿಕೊಳ್ಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಹಮ್ಮದ್‌ ಆರೀಫ್‌ ಕಲ್ಕಟ್ಟ,